ಬಿತ್ತನೆಗೆ ಬೇಕಾಗುವ ಬೇಸಾಯ ಸಾಮಗ್ರಿಗಳು (ಪ್ರತಿ ಹೆಕ್ಟೇರಿಗೆ)
ನಾಟಿ: ಅಕ್ಟೋಬರ್-ನವ್ಹೆಂಬರ್, ಜನವರಿ-ಮಾರ್ಚ್ ತಿಂಗಳುಗಳೂ ನಾಟಿ ಮಾಡಲು ಸೂಕ್ತ.
ಅ. ಬೀಜದ ತುಂಡುಗಳು
1. 8-10 ತಿಂಗಳ ರೋಗರಹಿತ ನಾಟಿ ಕಬ್ಬಿನ ತುಂಡುಗಳನ್ನು ಉಗಿ ಉಷ್ಣೋಪಚಾರ ಎ.ಎಸ್.ಟಿ. ಘಟಕದಲ್ಲಿ 500 ಸೆಂ. ನಲ್ಲಿ ಒಂದು ತಾಸು ಉಪಚರಿಸಿ ಉಪಯೋಗಿಸಬೇಕು ಅಥವಾ ಉಪಚರಿಸಿ ಬೆಳೆಸಿದ ನಾಟಿ ಕಬ್ಬಿನಿಂದ ತುಂಡುಗಳನ್ನು ಆಯ್ಕೆ ಮಾಡಬೇಕು.
2. ಕಾರ್ಬನ್ಡೈಜಿಮ್ 100 ಗ್ರಾಂ + ಕ್ಲೋರ್ಪೈರಿಪಾಸ್ 100 ಮಿ.ಲೀ. + ಯೂರಿಯಾ 100 ಗ್ರಾಂ. ಇವುಗಳನ್ನು 100 ಲೀಟರ್ ನೀರಿನಲ್ಲಿ ಹಾಕಿ 10 ನಿಮಿಷ ಬೀಜೋಪಚಾರ ಮಾಡಬೇಕು.
3. ಹೆಕ್ಟೇರಿಗೆ 25,000 ದಿಂದ 35,000 ಮೂರು ಕಣ್ಣಿನ ತುಂಡುಗಳು ಬೇಕಾಗುತ್ತವೆ.
ನಾಟಿ ಮಾಡುವುದು
ಭೂಮಿಯನ್ನು ಎರಡು ಮೂರು ಬಾರಿ ಚೆನ್ನಾಗಿ ಉಳುಮೆ ಮಾಡಿ ನಾಟಿಗೆ ಸಿದ್ಧಪಡಿಸಿ 90 ಸೆಂ.ಮೀ. ಅಂತರದ 15-25 ಸೆಂ.ಮೀ. ಆಳವಾದ ಸಾಲು ಮತ್ತು ಬೋದುಗಳನ್ನು ಮಾಡಬೇಕು. ನಂತರ ಬೀಜೋಪಚಾರ ಮಾಡಿದ ಉತ್ತಮ ಕಣ್ಣುಗಳುಳ್ಳ ತುಂಡುಗಳನ್ನು ಸಾಲಿಗೆ ನೀರು ಬಿಟ್ಟು ಸಾಲಿನಲ್ಲಿ ತುಳಿಯಬೇಕು.
ನಾಟಿ ಪದ್ಧತಿಗಳು
• ಆಳವಾದ ಕಪ್ಪು ಭೂಮಿಯಲ್ಲಿ 90 ಸೆಂ.ಮೀ. ಅಂತರದ ಬೋದು ಮತ್ತು ಸಾಲುಗಳನ್ನು ಮಾಡುವುದು ಉತ್ತಮ.
• ಮಧ್ಯಮ ಆಳದ ಕಪ್ಪು ಭೂಮಿಗೆ 60 ಅಥವಾ 90 ಸೆಂ.ಮೀ. ಸಾಲುಗಳನ್ನು ಮಾಡಿ, ಎರಡು ಸಾಲು ನಾಟಿ ಮಾಡಿ ಒಂದು ಸಾಲು ಹುಸಿ ಬಿಡಬೇಕು. ಅದರಲ್ಲಿ ಅಂತರ ಬೆಳೆಗಳನ್ನು ಲಾಭದಾಯಕವಾಗಿ ಬೆಳೆಯಬಹುದು. ಈ ಪದ್ಧತಿಯಲ್ಲಿ ಇಳುವರಿ ಕಡಿಮೆಯಾಗದೆ, ಅಂದಾಜು ಶೇ. 40 ರಷ್ಟು ನೀರಿನ ಉಳಿತಾಯ ಮಾಡಬಹುದು.
• ಕೆಂಪು ಭೂಮಿ ಮತ್ತು ನೀರಿನ ಕೊರತೆಯಿದ್ದಲ್ಲಿ ಗುಣಿ ನಾಟಿ ಪದ್ಧತಿ ಲಾಭದಾಯಕ. ಒಂದು ಮೀಟರ್ ಉದ್ದ, ಒಂದು ಮೀಟರ್ ಅಗಲ ಮತ್ತು 45 ಸೆಂ.ಮೀ. ಆಳದ ಗುಣಿಗಳನ್ನು ತೆಗೆಯಬೇಕು. ಗುಣಿಗಳು ಸಾಲಿನಿಂದ ಸಾಲಿಗೆ 90 ಸೆಂ.ಮೀ. ಹಾಗೂ ಸಾಲಿನಲ್ಲಿ 45 ಸೆಂ.ಮೀ. ಅಂತರ ಇರುವಂತೆ ನೋಡಿಕೊಳ್ಳಬೇಕು. ಗುಣಿಯ ತಳ ಭಾಗದಲ್ಲಿ 15 ಸೆಂ.ಮೀ. ಮಣ್ಣನ್ನು ಹಾಕಿ ನಂತರ 15 ಸೆಂ.ಮೀ. ದಪ್ಪ 4 ಸೆಂ.ಮೀ. ಕಾಂಪೋಸ್ಟ್ ಮತ್ತು ಹಸಿರೆಲೆ ಗೊಬ್ಬರ ಹಾಕಬೇಕು. ಇನ್ನುಳಿದ 15 ಸೆಂ.ಮೀ. ಸ್ಥಳದಲ್ಲಿ ಉಳಿದ ಮಣ್ಣು, 150 ಗ್ರಾಂ ಯೂರಿಯಾ, 130 ಗ್ರಾಂ ಸೂಪರ್ ಫಾಸ್ಪೇಟ್ ಮತ್ತು 85 ಗ್ರಾಂ ಮ್ಯುರೇಟ್ ಆಫ್ ಪೋಟ್ಯಾಷ್ಗಳನ್ನು ಸೇರಿಸಬೇಕು. ಇಂತಹ ಪ್ರತಿಯೊಂದು ಗುಣಿಯಲ್ಲಿ ನಾಟಿ ಮಾಡಲು ಎರಡು ಕಣ್ಣುಗಳುಳ್ಳ 20 ಬೀಜದ ತುಂಡುಗಳನ್ನು ಉಪಯೋಗಿಸಬೇಕು. ಸಾಲಿನಿಂದ ಸಾಲಿಗೆ ಇರುವ 90 ಸೆಂ.ಮೀ. ಸ್ಥಳವನ್ನು ನೀರು ಬಿಡಲು ಕಾಲುವೆಯನ್ನಾಗಿ ಬಳಸಬೇಕು. ಪ್ರತಿ ಎರಡು ಗುಣಿ ಸಾಲುಗಳ ನಂತರ ಕಾಲುವೆಯನ್ನು ಮಾಡಿ ಉಪಯೋಗಿಸಬೇಕು. ಒಂದು ಎಕರೆಗೆ ಸುಮಾರು 1460 ಗುಣಿಗಳು ಬೇಕಾಗುತ್ತವೆ.
ಕೊಳೆ ಕೊಬ್ಬು ನಿರ್ವಹಣೆ
1. ಉತ್ತಮ ಕುಳೆ ಕಬ್ಬಿನ ಇಳುವರಿಗಾಗಿ ಈ ಕೆಳಗಿನ ಅಂಶಗಳನ್ನು ಗಮನದಲ್ಲಿಡಬೇಕು.
ಅ. ನಾಟಿ ಕಬ್ಬು ಆರೋಗ್ಯಯುತವಾಗಿರಬೇಕು.
ಬ. ನಾಟಿ ಕಬ್ಬನ್ನು ಏಪ್ರಿಲ್ದಿಂದ ಆಗಸ್ಟ್ ತಿಂಗಳಲ್ಲಿ ಕಟಾವು ಮಾಡುವುದನ್ನು ಬಿಟ್ಟು ಉಳಿದ ತಿಂಗಳುಗಳಲ್ಲಿ ಕಟಾವು ಮಾಡಬಹುದು.
ಕ. ನಾಟಿ ಕಬ್ಬನ್ನು ಕಟಾವು ಮಾಡುವುದನ್ನು ಒಂದೇ ವಾರದಲ್ಲಿ (8-10 ದಿನಗಳ) ಮುಗಿಸಬೇಕು. ಕಟಾವು ಪೂರ್ವದಲ್ಲಿ (15 ದಿನ) ಬೆಳೆಗೆ ನೀರು ಹಾಯಿಸಬೇಕು.
2. ಕೋಲಿ ಸವರುವುದು
ಹರಿತವಾದ ಸಲಿಕೆ ಅಥವಾ ಕೊಯ್ತ (ಕುಡಗೋಲು) ದಿಂದ ಕಬ್ಬು ಕಡಿದ ನಂತರ ಉಳಿದಿರುವ ಉದ್ದ ಕೋಲಿಗಳನ್ನು ನೆಲಸಮನಾಗಿ ಕತ್ತರಿಸಬೇಕು. ಇದರಿಂದ ಒಂದೇ ಸಮನಾದ ಕೊಳೀಕೆ ಬರುತ್ತವೆ. ಬೇರುಗಳು ಆಳವಾಗಿ ನೆಲದಲ್ಲಿ ಪಸರಿಸಿ ಪೋಷಕಾಂಶ ಮತ್ತು ನೀರನ್ನು ಹೀರಿಕೊಳ್ಳುತ್ತವೆ.
3. ಕುಳೆ ಕಬ್ಬಿನಲ್ಲಿ ರವದಿಯ ನಿರ್ವಹಣೆ
ಒಂದು ಹೆಕ್ಟೇರಿಗೆ 8-10 ಟನ್ ಒಣ ರವದಿ ದೊರೆಯುವುದು. ಇದನ್ನು ಸುಡದೆ ಕುಳೆ ಬೆಳೆಯಲ್ಲಿ ವ್ಯವಸ್ಥಿತವಾಗಿ ಹಾಕಿದಲ್ಲಿ ಮಣ್ಣಿನ ಸಾವಯವ ಪದಾರ್ಥ ಹಾಗೂ ಪೋಷಕಾಂಶಗಳ ಮಟ್ಟ ಹೆಚ್ಚುತ್ತದೆ. ರವದಿಯಲ್ಲಿ ಶೇ. 0.35 ಸಾರಜನಕ, ಶೇ. 0.13 ರಂಜಕ ಮತ್ತು ಶೇ. 0.65 ಪೋಟ್ಯಾಷ್ ಇರುವುದು. ಕೊಳೆ ಕಬ್ಬಿನಲ್ಲಿ ರವದಿಯನ್ನು ಎರಡು ಸಾಲುಗಳ ಮಧ್ಯೆ ಹಾಕಬೇಕು. ಇದಕ್ಕೆ 50 ಕಿ.ಗ್ರಾಂ ಯೂರಿಯಾ ಮತ್ತು 50 ಕಿ.ಗ್ರಾಂ ಸೂಪರ್ ಫಾಸ್ಫೇಟ್ ಗೊಬ್ಬರವನ್ನು ರವದಿಯ ಮೇಲೆ ಹಾಕಬೇಕು. ನಂತರ 5-6 ಕಿ.ಗ್ರಾಂ ರವದಿ ಕಳಿಸುವ ಸೂಕ್ಷ್ಮಾಣುಜೀವಿ (ಟ್ರೈಕೊಡರ್ಮಾ ವಿರಿಡೆ) ಸಗಣಿ ಕಲಿಸಿದ ನೀರಿನಲ್ಲಿ ಮಿಶ್ರಣ ಮಾಡಿ ರವದಿಯ ಮೇಲೆ ಸಿಂಪರಿಸಬೇಕು. ಇದರಿಂದ ರವದಿ ಬೇಗನೆ ಕಳಿಯುವುದು. ಸಾಲು ಬಿಟ್ಟು ಸಾಲಿನಲ್ಲಿ ರವದಿ ಹೊದಿಸುವುದರಿಂದ ಮಣ್ಣಿನಲ್ಲಿ ತೇವಾಂಶ ಕಾಪಾಡುವುದರ ಜೊತೆಗೆ ಕಳೆಗಳ ನಿಯಂತ್ರಣವನ್ನು ಮಾಡಬಹುದು ಮತ್ತು ಖಾಲಿ ಇರುವ ಸಾಲುಗಳಲ್ಲಿ ಬೋದು ಏರಿಸಿ ನೀರು ಹಾಯಿಸುವುದು ಸೂಕ್ತ.
ಆ. ಕೆಳಗಿನ ಸ್ಥಿತಿಗಳಲ್ಲಿ ರವದಿ ಸುಡುವುದು ಮಹತ್ವದ್ದು
• ನಾಟಿ ಕಬ್ಬು ಕೀಟ ಮತ್ತು ರೋಗಗಳ ಬಾಧೆಗೆ ತುತ್ತಾದಾಗ. (ಉದಾ:-ಸ್ಕೇಲ್ಸ್, ಹಿಟ್ಟು ತಿಗಣೆ)
• ಗೆದ್ದಲು ಹುಳದ ಬಾಧೆ ಕಂಡು ಬಂದಲ್ಲಿ ಅಥವಾ ಇಲಿಗಳ ಮತ್ತು ಹೆಗ್ಗಣಗಳ ಕಾಟ ಇದ್ದಲ್ಲಿ.
• ನೀರು ಬಸಿಯುವ ಕೊರತೆಯಿಂದಾಗಿ ಹೆಚ್ಚುವರಿ ತೇವಾಂಶದಿಂದ ನಾಟಿ ಮಾಡಲು ಸಾಧ್ಯವಾಗದಿದ್ದಲ್ಲಿ
4. ಸಾಲೊಡೆಯುವುದು ಮತ್ತು ಮಣ್ಣನ್ನು ಮೃದುಗೊಳಿಸುವುದು
ಬೋದುಗಳ ಎರಡು ಮಗ್ಗಲಿಗೆ ಬಲರಾಮ ಅಥವಾ ತ್ರಿಶೂಲ ನೇಗಿಲ ಸಹಾಯದಿಂದ ಸಾಲುಗಳನ್ನು ಒಡೆಯುವುದರ ಮೂಲಕ ಮಣ್ಣು ಸಡಿಲವಾಗಿ ಮೇಲ್ಭಾಗದ ಹಳೆಯ ಬೇರುಗಳು ಹರಿದು ಹೊಸ ಬೇರು ಬರಲು ಅನುಕೂಲವಾಗುತ್ತದೆ. ಅಲ್ಲದೇ, ನೆಲದ ಮೇಲಿರುವ ಕಬ್ಬಿನ ಭಾಗಕ್ಕೆ ಮಣ್ಣು ಏರಿಸಿದಂತಾಗುತ್ತದೆ. ಈ ರೀತಿ ಮಾಡುವುದರಿಂದ ಕೊಳೆ ಕಬ್ಬು ಹೆಚ್ಚಿಗೆ ಮರಿ ಒಡೆಯುತ್ತದೆ.
5. ಹುಸಿ ನಾಟಿಮಾಡುವುದು
ನಾಟಿ ಕಬ್ಬು ಶಿಲೀಂಧ್ರ ರೋಗಗಳಿಗೆ, ಕೀಟಗಳಿಗೆ ತುತ್ತಾಗಿ ಸರಿಯಾಗಿ ಬೆಳೆಯದೇ ಇದ್ದಲ್ಲಿ ಶೇ. 30 ಕ್ಕಿಂತ ಹೆಚ್ಚು ಹುಸಿ ಗುಣಿಗಳು ಕೊಳೆ ಕಬ್ಬಿನಲ್ಲಿ ಕಂಡು ಬರುತ್ತವೆ. ಕೊಳೆ ಕಬ್ಬಿನ ಸಾಲಿನಲ್ಲಿ 60 ಸೆಂ.ಮೀ. ಅಂತರದಲ್ಲಿ ಯಾವುದೇ ಕಬ್ಬಿನ ಸಸಿಗಳು ಇರದೇ ಹೋದರೆ, ಅಂಥ ಸ್ಥಳಗಳಲ್ಲಿ ಹುಸಿ ತುಂಬುವುದು ಅವಶ್ಯ. ತುಂಬಿ ಒಂದು ಕಣ್ಣಿನ ಬೀಜದ ತುಂಡುಗಳನ್ನು ಕಾರ್ಬನ್ಡೈಜಿಮ್ ದ್ರಾವಣದಲ್ಲಿ ಅದ್ದಿ ಕಣ್ಣು ಮೇಲೆ ಬರುವಂತೆ ಅಡ್ಡಲಾಗಿ ಪಾಲಿಬ್ಯಾಗನಲ್ಲಿ ನಾಟಿ ಮಾಡಬೇಕು. ಒಂದು ತಿಂಗಳ ಸಸಿ ತಯಾರಾದ ಮೇಲೆ ಹುಸಿ ತುಂಬಲು ಉಪಯೋಗಿಸಬೇಕು. ಒಚಿಟಿ ಕಣ್ಣಿನ ಸಸಿಗಳನ್ನು ಸಸಿಮಡಿಗಳಲ್ಲಿಯೂ ತಯಾರಿಸಿಕೊಳ್ಳಬಹುದು. ಸಸಿ ನಾಟಿಮಾಡುವಾಗ ಹುಸಿ ಇರುವ ಸ್ಥಳದಲ್ಲಿ ಸಣ್ಣ ಗುಣಿ ಮಾಡಿ ಅದರಲ್ಲಿ ಸ್ವಲ್ಪ ಪ್ರಮಾಣದ ಸೂಪರ್ ಫಾಸ್ಪೇಟ್ ಹರಳನ್ನು ಹಾಕಿ ಪಾಲಿಬ್ಯಾಗನ್ನು ಹರಿದು ನಾಟಿಮಾಡಬೇಕು. ಕೊಳೆ ಬೆಳೆಯಲ್ಲಿ ರೋಗಪೀಡಿತ ಕುಳೆಗಳನ್ನು ಅಗೆದು ಹುಸಿ ಗುಣಿಗಳನ್ನು ತುಂಬುವುದು ಸೂಕ್ತ.