:
ಬೇಸಾಯ ಸಾಮಗ್ರಿಗಳು
ಬೀಜ
ಕ್ರ.ಸಂ ವಿವರಗಳು ಪ್ರತಿ ಹೆಕ್ಟೇರಿಗೆ
1 ಕೈ ಅಥವಾ ಕೂರಿಗೆ ಬಿತ್ತನೆ 20-25 ಕಿ.ಗ್ರಾಂ
2 ಸಸಿಮಡಿ ಮಾಡಲು 5-6 ಕಿ.ಗ್ರಾಂ
3 ಗಡ್ಡೆನಾಟಿ ಮಾಡಲು 875 ಕಿ.ಗ್ರಾಂ
ಬೇಸಾಯ ಕ್ರಮಗಳು
ಈ ಬೆಳೆಯನ್ನು 3 ವಿಧಗಳಲ್ಲಿ ಬಿತ್ತನೆ ಮಾಡಬಹುದು. 1) ಸಸಿ ನಾಟಿ ಮಾಡುವುದು, 2) ಕೂರಿಗೆ ಬಿತ್ತನೆ ಅಥವಾ ಬಿತ್ತರಿಸುವುದು, 3) ಗೆಡ್ಡೆ ನಾಟಿ ಮಾಡುವುದು.
1. ಸಸಿಮಡಿ: ಒಂದು ಹೆಕ್ಟೇರಿಗೆ ಬೇಕಾಗುವ ಸಸಿಗಳನ್ನು ಬೆಳೆಯಲು 7.5 ಮೀಟರ್ ಉದ್ದ, 1.2 ಮೀಟರ್ ಅಗಲ ಮತ್ತು 10 ಸೆಂ.ಮೀ. ಎತ್ತರದ 25 ಮಡಿಗಳನ್ನು ತಯಾರಿಸಬೇಕು. ಮಡಿಗಳಿಗೆ 3-4 ಬುಟ್ಟಿ ಕೊಟ್ಟಿಗೆ ಗೊಬ್ಬರ ಮತ್ತು ಅರ್ಧ ಕಿ.ಗ್ರಾಂ 15:15:15 ಸಂಯುಕ್ತ ರಾಸಾಯನಿಕ ಗೊಬ್ಬರವನ್ನು ಮಣ್ಣಿನಲ್ಲಿ ಚೆನ್ನಾಗಿ ಬೆರೆಸಬೇಕು. ನಂತರ ಬಿತ್ತನೆ ಬೀಜವನ್ನು 7.5 ಸೆಂ.ಮೀ. ಅಂತರದ ಸಾಲುಗಳಲ್ಲಿ ಬಿತ್ತಬೇಕು. ತಕ್ಷಣ ಮಡಿಗಳಿಗೆ ನೀರುಣಿಸಬೇಕು. ಹೀಗೆ ಮಾಡಿದ ಸಸಿಗಳು 6-8 ವಾರಗಳಲ್ಲಿ ನಾಟಿ ಮಾಡಲು ಸಿದ್ಧವಾಗುತ್ತವೆ.
ನಾಟಿ ವಿಧಾನ: ನಾಟಿ ಮಾಡುವ ಮುನ್ನ ಪೂರ್ತಿ ಪ್ರಮಾಣದ ಕೊಟ್ಟಿಗೆ ಗೊಬ್ಬರ, ಶೇ. 50 ರಷ್ಟು ಸಾರಜನಕ, ಪೂರ್ತಿ ಪ್ರಮಾಣದ ರಂಜಕ ಮತ್ತು ಪೊಟ್ಯಾಷ್ ಕೊಡಬೇಕು. ಸಸಿಗಳನ್ನು 15 ಸೆಂ.ಮೀ. ಅಂತರದ ಸಾಲುಗಳಲ್ಲಿ 10 ಸೆಂ.ಮೀ.ಗೆ ಒಂದರಂತೆ ಹೆಚ್ಚು ಆಳಕ್ಕೆ ಇಳುಯದಂತೆ ನಾಟಿ ಮಾಡಬೇಕು. ನಾಟಿ ಮಾಡಿದ ತಕ್ಷಣ ನೀರು ಹಾಯಿಸಬೇಕು. ಆರು ವಾರಗಳ ನಂತರ ಉಳಿದ ಶೇ. 50 ರಷ್ಟು ಸಾರಜನಕವನ್ನು ಮೇಲುಗೊಬ್ಬರವಾಗಿ ಕೊಡಬೇಕು.
2. ಕೂರಿಗೆ ಬಿತ್ತನೆ ಅಥವಾ ಬಿತ್ತರಿಸುವುದು
ಈ ಪದ್ಧತಿಯು ಮಳೆಯಾಶ್ರಿತ ಬೆಳೆಗೆ ರೂಢಿಯಲ್ಲಿದೆ.
1. ಬಿತ್ತರಿಸುವುದು: ಬಿತ್ತನೆ ಮಾಡಲು ಜಮೀನನ್ನು ಸಿದ್ಧಪಡಿಸಿ ಶಿಫಾರಸ್ಸು ಮಾಡಿದ ಪೂರ್ತಿ ಪ್ರಮಾಣದ ಸಾವಯವ ಮತ್ತು ರಾಸಾಯನಿಕ ಗೊಬ್ಬರವನ್ನು ಮಣ್ಣಿನಲ್ಲಿ ಸೇರಿಸಿ, ನಮತರ 1.2x1.2 ಮೀ. ಅಂತರದ ಮಡಿಗಳನ್ನು ಮಾಡಿ ತೆಳ್ಳಗೆ ಬೀಜವನ್ನು ಕೈಯಿಂದ ಬಿತ್ತಿ 4 ವಾರಗಳ ನಂತರ 5 ಸೆಂ.ಮೀ.ಗೆ ಒಂದು ಸಸಿಯನ್ನುಳಿಸಿ ಉಳಿದವುಗಳನ್ನು ತೆಗೆಯಿರಿ.
2. ಕೂರಿಗೆ ಬಿತ್ತನೆ: ಭೂಮಿಯನ್ನು ಬಿತ್ತನೆಗೆ ಸಿದ್ಧಪಡಿಸಿ ಶಿಫರಸ್ಸು ಮಾಡಿದ ಪೂರ್ತಿ ಪ್ರಮಾಣದ ಸಾವಯವ ಗೊಬ್ಬರ ಹಾಗೂ ರಾಸಾಯನಿಕ ಗೊಬ್ಬರಗಳನ್ನು ಮಣ್ಣಿನಲ್ಲಿ ಚೆನ್ನಾಗಿ ಬೆರೆಸಿ ಬೀಜವನ್ನು 30 ಸೆಂ.ಮೀ. ಅಂತರದ ಸಾಲಿನಲ್ಲಿ ಕೂರಿಗೆಯಿಂದ ಬಿತ್ತನೆ ಮಾಡಬೇಕು.
3. ಗೆಡ್ಡೆ ನಾಟಿ ಮಾಡುವುದು (ಗೊಂಚಲು ಈರುಳ್ಳಿ)
ಆಮೀನನ್ನು ಬಿತ್ತನೆಗೆ ಸಿದ್ಧಮಾಡಿ, ಶಿಫಾರಸ್ಸು ಮಾಡಿದ ಪೂರ್ತಿ ಪ್ರಮಾಣದ ಸಾವಯವ ಗೊಬ್ಬರ, ರಂಜಕ, ಪೊಟ್ಯಾಷ್ ಮತ್ತು ಅರ್ಧ ಭಾಗ ಸಾರಜನಕ ರಸಗೊಬ್ಬರಗಳನ್ನು ಮಣ್ಣಿನಲ್ಲಿ ಸೇರಿಸಿ, ನಂತರ 15 ಸೆಂ.ಮೀ. ಅಂತರದ ಬದುಗಳನ್ನು ಮಾಡಿ ಬದುವಿನ ಒಂದು ಪಕ್ಕದಲ್ಲಿ ಪ್ರತಿ 10 ಸೆಂ.ಮೀ.ಗೆ ಒಂದರಂತೆ ಗಡ್ಡೆ ನಾಟಿ ಮಾಡಿ, ನೀರು ಹಾಯಿಸಿ, 6 ವಾರಗಳ ನಂತರ ಉಳಿದ ಅರ್ಧಭಾಗ ಸಾರಜನಕವನ್ನು ಮೇಲುಗೊಬ್ಬರವಾಗಿ ಕೊಡಬೇಕು.